ವಿಘ್ನಸಂತೆ
	ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನಲ್ಲಿ ಕಸಬೆ ಯಿಂದ ಆಗ್ನೇಯಕ್ಕೆ 16 ಕಿಮೀ ದೂರದಲ್ಲಿ, ನೊಣವಿನಕೆರೆಯಿಂದ ಸು. 5 ಕಿಮೀ ನೈಋತ್ಯದಲ್ಲಿ ಇರುವ ಗ್ರಾಮ. ಈ ಹಳ್ಳಿಯ ಪ್ರಾಚೀನ ಹೆಸರು ಇಗನಸಂತೆ. ಹೊಯ್ಸಳರ ಕಾಲದಲ್ಲಿ ಇದೊಂದು ಪ್ರಮುಖ ಸ್ಥಳವಾಗಿತ್ತು.

	ಲಕ್ಷ್ಮೀನರಸಿಂಹ ದೇವಾಲಯ ಇಲ್ಲಿಯ ಪ್ರಧಾನ ಆಕರ್ಷಣೆ. ಹೊಯ್ಸಳ ಮೂರನೆಯ ನರಸಿಂಹನ ದಂಡನಾಯಕರೂ ಮಲ್ಲಿದೇವದಂಡನಾಯ ಕನ ಮಕ್ಕಳೂ ಆದ ಅಪ್ಪಯ್ಯ, ಗೋಪಾಲ ಮತ್ತು ಮಾಧವ ಎಂಬವರು ಈ ದೇವಾಲಯವನ್ನು ಕಟ್ಟಿಸಿದರೆಂದು (1286) ಇಲ್ಲಿಯ ಒಂದು ಶಾಸನ ತಿಳಿಸುತ್ತದೆ. ಲಕ್ಷ್ಮೀನರಸಿಂಹ ದೇವಾಲಯ ಹೊಯ್ಸಳ ಶೈಲಿಯ ಲ್ಲಿರುವ ತ್ರಿಕೂಟಾಚಲ. ದೇವಾಲಯದ ಮುಖ್ಯ ಗರ್ಭಗೃಹದಲ್ಲಿ ಕೇಶವ, ಪಶ್ಚಿಮದ ಗರ್ಭಗುಡಿಯಲ್ಲಿ ಲಕ್ಷ್ಮೀನಾರಾಯಣ ಮತ್ತು ದಕ್ಷಿಣದ ಗರ್ಭಗುಡಿಯಲ್ಲಿ ವೇಣುಗೋಪಾಲ ವಿಗ್ರಹಗಳು ಪ್ರತಿಷ್ಠಾಪಿತವಾಗಿವೆ. ಇವು ಸುಂದರ ಹೊಯ್ಸಳ ಕೃತಿಗಳು. ವಿಶಿಷ್ಟ ವಿನ್ಯಾಸ ಮತ್ತು ಸೂಕ್ಷ್ಮ ಶಿಲ್ಪಾಲಂಕರಣಗಳಿಂದ ಕೂಡಿದ ಹೊಯ್ಸಳ ಶೈಲಿಯಲ್ಲೇ ಪೂರ್ಣವಾಗಿ ರಚಿತವಾಗಿರುವ ದೇವಾಲಯಗಳಲ್ಲಿ ಈ ಲಕ್ಷ್ಮೀನರಸಿಂಹ ದೇವಾಲಯ ಬಹುಶಃ ಕೊನೆಯದು. ಇದರಲ್ಲೂ ಹೊರ ಭಿತ್ತಿಯ ಮೇಲೆ ಶಿಲ್ಪಾವಳಿಯಿಲ್ಲದೆ ಬರಿಯ ಅರೆಗಂಬಗಳಿರುವುದು ಮತ್ತು ಶಿಖರದ ವಿನ್ಯಾಸ ಮಾಮೂಲಿಗಿಂತ ಸ್ವಲ್ಪ ವ್ಯತ್ಯಸ್ತವಾಗಿರುವುದು ಗಮನಾರ್ಹ ಬದಲಾವಣೆಗಳು.

	ಬಾಲಲಿಂಗೇಶ್ವರ ದೇವಾಲಯ ಲಕ್ಷ್ಮೀನರಸಿಂಹ ದೇವಾಲಯದ ಉತ್ತರ-ಈಶಾನ್ಯ ದಿಶೆಯಲ್ಲಿ ಚಿಕ್ಕ ಹಳ್ಳವೊಂದರ ಪಕ್ಕದಲ್ಲಿದೆ. ಇದೂ ಮೇಲಿನ ದೇವಾಲಯದ ವಿನ್ಯಾಸದಲ್ಲಿಯೇ ಇರುವ ತ್ರಿಕೂಟಾಚಲ. ಭೈರವ (ಬೋರೆದೇವ) ದೇವಾಲಯ ಗರ್ಭಗೃಹ ಮತ್ತು ಮುಖಮಂಟಪ ಗಳನ್ನುಳ್ಳ ಚಿಕ್ಕ ಗುಡಿ. ಇದರಲ್ಲಿ ಸು. 13-14ನೆಯ ಶತಮಾನದ ಕೆಲವು ವಿಗ್ರಹಗಳಿವೆ. ಗ್ರಾಮದ ಉತ್ತರಕ್ಕೆ ಹೊಲವೊಂದರಲ್ಲಿ ಬನಶಂಕರಿ ದೇವಾಲಯವಿದೆ. ಗರ್ಭಗೃಹ ಮತ್ತು ಸುಕನಾಸಿ ಮಾತ್ರವಿರುವ ಈ ದೇವಾಲಯದಲ್ಲಿ ಸುಖಾಸನಾರೂಢವಾದ ಬಹುಶಃ ಹೊಯ್ಸಳ ಕಾಲಕ್ಕೆ ಸೇರಿದ ದೇವಿಯ ವಿಗ್ರಹವಿದೆ. ಈ ದೇವಿ ಇಲ್ಲಿಯ ನೇಕಾರರ ಅಧಿüದೇವತೆ.
	 										(ಎಮ್.ಎಲ್.ಎಸ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ